Sunday, May 24, 2020

ಏಕೆ ಸೆಳೆಯುವೆ?

ಬೊಗಸೆ ಕಂಗಳ ಚೆಲುವೆ 
ನಿನಗೇಕೆ ಹೊಸ ಮರುಳೆ 
ನಲಿವ ಹೂಗಳ ನಡುವೆ 
ಹಾಗೇಕೆ ನಿಂತಿರುವೆ 
ನನ್ನೇಕೆ ನೋಡುವೆ?

ಆ ದಿಟ್ಟ ನೋಟದಲಿ 
ಬಿಚ್ಚಿಟ್ಟ ತುಟಿಗಳಲಿ 
ಬಿರಿವ ಮಂದಹಾಸದಲಿ 
ಅದೇನು ಹೇಳುತಿರುವೆ 
ಏನನ್ನು ಬಯಸುವೆ?

ತಂಗಾಳಿ ಜೊತೆ ಕಲೆತು 
ಬೃಂಗಗಳ ಜೊತೆ ಬೆರೆತು
ಹೃದಯ ತಾಳದ ಲಯದಿ 
ಹಾಗೇಕೆ ಗುನುಗುವೆ  
ಮನಸೇಕೆ ತಟ್ಟುವೆ?

ಭಾವ ಬೃಂದಾವನದಿ 
ಹರಿವ ತೊರೆಯಂಚಿನಲಿ 
ನಲಿವ ನನ್ನರಸಿಯ 
ರಾಗ ತಾಳ ಸ್ವರಗಳಲಿ 
ನೀನೇಕೆ ಹಾಡುವೆ 
ನನ್ನೇಕೆ ಸೆಳೆಯುವೆ?

No comments:

Post a Comment