Wednesday, November 29, 2017

ಭಾವ-ಜೀವ



ಹೊಳೆವ ಕಂಗಳ ಸೆಳೆತ
ಬಿರಿವ ಕಂಗಳ ಹೊಳೆತ
ಬಡಿವ ಹೃದಯದ ಮಿಡಿತ
ಅರಳೊ ಹೂಗಳ ಪುಳಕ
ಹಾರೊ ದುಂಬಿಯ ಗಮಕ
ಎಲ್ಲಾ ಹೇಳುವ ಭಾವ ಖುಶಿ

ಹನಿವ ಕಂಗಳ ಮೊರೆತ
ಕೆಂಪು ಕಂಗಳ ಕೊರೆತ
ಬುಸುಗುಡುವ ಏದುಸಿರು
ಬಿಡದೆ ಕಾಡುವ ನೆನಪು
ಕೊನೆಯೇ ಇಲ್ಲದ ಏಕಾಂತ
ಎಲ್ಲಾ ಹೇಳುವ ಭಾವ ನೋವು

ಸೋಲಿನ ನಿರಾಸೆಯಲ್ಲಿ ಸಾಂತ್ವನ
ಸಾಧನೆಯ ಹಾದಿಯಲ್ಲಿ ಪ್ರೇರಣೆ
ತಿರುವು ತೊಡಕುಗಳಲ್ಲಿ ವಿಮರ್ಶಣೆ
ಗೆಲುವಿನಲ್ಲಿ  ಸಂಭ್ರಮಾಚರಣೆ
ಇವೆಲ್ಲವೂ ಸ್ನೇಹದ ಭಾವನೆ

ನಾನು ನನ್ನದೆನ್ನುವ ಮಮಕಾರ
ನೀನು ನಿನ್ನದೆನ್ನುವ ಮತ್ಸರ
ತಾನು ಸಾಧಿಸಿದೆನೆಂಬ ಅಹಂಕಾರ
ತನ್ನದು ಕಳೆದುಕೊಂಡ ಹಾಹಾಕಾರ
ಇವೆಲ್ಲವೂ ಮೋಹದ ಭಾವನೆ

ನೋವು ನಲಿವುಗಳ ಸಂಗಮ
ಆಸೆ ನಿರಾಸೆಗಳ ಸಮಾಗಮ
ಹಗಲು ರಾತ್ರಿಗಳ ಸಮ್ಮಿಶ್ರಣ
ಸ್ನೇಹ ಮೋಹಗಳ ಅನ್ವೇಷಣ
ಇದುವೇ ಅಲ್ಲವೇ ಜೀವನ!!

No comments:

Post a Comment