Saturday, March 24, 2018

ಆಸೆ

ಮುಂಜಾನೆ ಮಂಜಿನಲಿ, 
ಬರಿಗಾಲ ನಡಿಗೆಯಲಿ 
ಹರಿನಾಮ ಜಪಿಸುತಲಿ 
ಬಿರಿದ ಹೂಗಳನರಸಿ 
ಆಯ್ದು ಬುಟ್ಟಿಯಲಿರಿಸಿ 
ನಡೆವ ಅಜ್ಜನ ಹುರುಪ 
ರಹಸ್ಯವನು ತಿಳಿವಾಸೆ!

ಬರುವ ಸೂರ್ಯನ ಕಾದು 
ಬಾನು ಕೆಂಪೇರುವ ಮುನ್ನ 
ದಿನಚರಿಗೆ ಸಜ್ಜಾಗಿ
ಅವಸರವು ಹೆಚ್ಚಾಗಿ  
ಹೊರಟ ಹಕ್ಕಿಯ ಹುಡುಕಿ 
ಚಿಲಿಪಿಲಿಯ ಕದಿವಾಸೆ!

ಹನಿಯಾಗಿ ಹುಟ್ಟಿ 
ತೊರೆಯಾಗಿ ಬೆಳೆದು,
ಝರಿಯಾಗಿ ಧುಮುಕಿ,
ಅಡೆತಡೆಗಳಿಗಣಿಯದೇ 
ನದಿಯಾಗಿ ಹರಿದು
ಸಾಗರವ ಸೇರುವ,
ದೃಢತೆಯನು ಪಡೆವಾಸೆ!

ಬೀಜವಾಗಿ ಮೊಳೆತು
ಗಿಡವಾಗಿ ಚಿಗುರಿ 
ಮರವಾಗಿ ಅರಳಿ 
ಬಿಸಿಲು ಬಿರುಗಾಳಿಯಲಿ 
ನೆರಳಾಗಿ ನಲಿವ 
ಸರಳತೆಯ ಕಲಿವಾಸೆ! 

No comments:

Post a Comment